ದೊಡ್ಡ ಮರ  -
ಸೈಮಾರೂಬೇಸೀ ಕುಟುಂಬಕ್ಕೆ ಸೇರಿದ ವನ್ಯವೃಕ್ಷ. ಹೆಮ್ಮರ ಮೂಸಿಮರ, ಯಾಯಿಮರ, ಏಲಾರಿಮರ ಮುಂತಾದವು ಪರ್ಯಾಯ ನಾಮಗಳು. ಐಲ್ಯಾಂತಸ್ ಎಕ್ಸೆಲ್ಸ ಇದರ ಶಾಸ್ತ್ರಿಯ ಹೆಸರು. ಈ ವೃಕ್ಷ ದಕ್ಷಿಣ ಭಾರತ, ಮಧ್ಯ ಭಾರತ, ಗುಜರಾತ್, ಬಿಹಾರ ಮತ್ತು ಆಂಧ್ರ ಪ್ರದೇಶದ ಕಾಡುಗಳಲ್ಲಿ ವಿಶೇಷವಾಗಿ ಬೆಳೆಯುತ್ತದೆ. ಇದರ ಹಸಿಯ ಮರಕ್ಕೆ ಹೊಳೆಯುವ ಹಳದಿಮಿಶ್ರಿತ ಬಿಳಿ ಬಣ್ಣ ಉಂಟು. ಅದು ಕ್ರಮೇಣ ಬೂದು ಬಣ್ಣಕ್ಕೆ ತಿರುಗುತ್ತದೆ.  ಚೌಬೀನೆ ಮೃದುವಾಗಿಯೂ ಹಗುರವಾಗಿಯೂ ಉಂಟು. ಬಾಳಿಕೆ ಬರುವುದಿಲ್ಲ. ಇದರಿಂದ ದೋಣಿ, ತೇಲು ತೆಪ್ಪ ಮತ್ತು ಟೀ ಪೆಟ್ಟಿಗೆಗಳನ್ನು ತಯಾರಿಸುವುದುಂಟು. ಉಪಕರಣಗಳ ಹಿಡಿ, ಪೀಪಾಯಿ ಮತ್ತು ಆಟಿಕೆಗಳನ್ನು ತಯಾರಿಸುವುದಕ್ಕೂ ಇದನ್ನು ಬಳಸಲಾಗುತ್ತದೆ. ಈ ಮರದಿಂದ ಗೋಂದಿನಂಥ ವಸ್ತುವೊಂದು ಉತ್ಪತ್ತಿಯಾಗುತ್ತದೆ.  ಮರದ ತೊಗಟೆಯನ್ನು ಜ್ವರನಿವಾರಕವಾಗಿಯೂ ಶಕ್ತಿವರ್ಧಕವಾಗಿಯೂ ಉಪಯೋಗಿಸಲಾಗುವುದು. ದೊಡ್ಡ ಮರ 20-30 ಮೀ. ಎತ್ತರಕ್ಕೆ ಬೆಳೆಯುವ ಹೆಮ್ಮರ, ಸಂಯುಕ್ತ ಮಾದರಿಯ ಎಲೆಗಳಿಂದ ಕೂಡಿದ್ದು ಸುಂದರವಾಗಿ ಕಾಣುವುದರಿಂದ ಇದನ್ನು ಉದ್ಯಾನಗಳಲ್ಲಿ ಅಲಂಕಾರಕ್ಕೆಂದು ಬಳಸುವುದೂ ಉಂಟು. ದೊಡ್ಡ ಮರದ ಹತ್ತಿರ ಸಂಬಂಧಿಯಾದ  ಐಲ್ಯಾಂತಸ್ ಮಲಬಾರಿಕಸ್ ಎಂಬುದು ಗುಗ್ಗುಳ ಧೂಪ, ಮಡ್ಡಿಧೂಪ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. 
(ಟಿ.ಎಸ್.ಸಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ